ನರಸಿಂಗರಾವ್, ಮಾನ್ವಿ
1911-1969. ಹೈದರಾಬಾದು ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವನಿರ್ಮಾಣಕಾರರಲ್ಲೊಬ್ಬರು; ಮಾನ್ವಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಹುಟ್ಟಿದ್ದು ರಾಯಚೂರಿನಲ್ಲಿ (2-4-1911). ತಂದೆ ರಾಘವೇಂದ್ರರಾವ್, ತಾಯಿ ಚಂದ್ರಮ್ಮ. ಮೂವರು ಮಕ್ಕಳಲ್ಲಿ ಎರಡನೆಯವರು. ತಂದೆ ರಾಯಚೂರಿನ ತಹಸೀಲ್ ಕಚೇರಿಯಲ್ಲಿ ಗಿರ್ದಾವರ್ ಆಗಿದ್ದರು. ಅಂತೆಯೆ ನರಸಿಂಗರಾಯರ ಬಾಲ್ಯಜೀವನ ರಾಯಚೂರಿನಲ್ಲಿಯ ಪಂಡಿತ ತಾರಾನಾಥರಾಯರ ಹಮ್‍ದರ್ದ್ ಹೈಸ್ಕೂಲು ಮತ್ತು ರಾಯಚೂರಿನ ಕನ್ನಡ ತರುಣ ಸಂಘದ ವಾತಾವರಣದಲ್ಲಿ ರೂಪಿತವಾಯಿತು. ಇವರು ಹೈಸ್ಕೂಲಿನಲ್ಲಿ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಯೆಂದು ಪ್ರಸಿದ್ಧರಾಗಿದ್ದರು. ಮೆಟ್ರಿಕ್ ಆದ ಮೇಲೆ ಹೆಚ್ಚಿನ ಅಭ್ಯಾಸಕ್ಕೆ ಹೈದರಾಬಾದಿಗೆ ಹೋಗಿ ಅಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ವರೆಗೆ ಓದಿದರು. ಅನಂತರ ಮೈಸೂರಿಗೆ ಬಂದು ಮೈಸೂರು ವಿಶ್ವವಿದ್ಯಾನಿಲಯದಿಂದ 1936ರಲ್ಲಿ ಎಂ.ಎ. ಪರೀಕ್ಷೆಯನ್ನು ಮೊದಲನೆಯ ದರ್ಜೆಯಲ್ಲಿ ಪಾಸು ಮಾಡಿದುದಲ್ಲದೆ ಸ್ವರ್ಣಪದಕವನ್ನೂ ಪಡೆದರು. ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ. ಶ್ರೀಕಂಠಯ್ಯ ಮೊದಲಾದವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದು, ಆ ಪರಂಪರೆಯನ್ನು ಬೆಳೆಸಿದರು.

	ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ 1930ರಲ್ಲಿ ಕುಮಾರಿ ಪ್ರಮೀಳಾ ಅವರೊಂದಿಗೆ ಇವರ ಲಗ್ನವಾಯಿತು.

	ಶಿಕ್ಷಣದ ತರುವಾಯ ಮೈಸೂರಿನಿಂದ ಹೈದರಾಬಾದಿನಲ್ಲಿ ಇವರು ಪ್ರೈಮರಿ ಶಾಲೆಯೊಂದರಲ್ಲಿ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. 1941-42ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನ ಛಾತ್ರರಾಗಿದ್ದರು. ಸ್ವಲ್ಪ ಕಾಲ ಅಧ್ಯಾಪಕರಾಗಿಯೂ ಕೆಲಸ ಮಾಡಿದರು. ವಾತಾವರಣ ಒಗ್ಗಲಿಲ್ಲವಾಗಿ ಅಲ್ಲಿನ ಕೆಲಸ ಬಿಟ್ಟು 1942ರಲ್ಲಿ ನಿಜಾಮ್ ಸರ್ಕಾರದ ಸಮಾಚಾರ ಹಾಗೂ ಜನಸಂಪರ್ಕ ಇಲಾಖೆಯಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಲು ಆರಂಭಿಸಿದರು. 1946ರಿಂದ 1948ರವರೆಗೆ ರಾಯಚೂರು ಜಿಲ್ಲೆಯ ಚುನಾವಣಾಧಿಕಾರಿಯಾಗಿದ್ದರು. 1948ರಲ್ಲಿ ನಿಜಾಮ್ ಸರ್ಕಾರ ಭಾರತ ಸರ್ಕಾರದಲ್ಲಿ ವಿಲೀನವಾಗಲು ಚುನಾವಣಾಧಿಕಾರಿಯ ಸ್ಥಾನ ರದ್ದುಗೊಂಡಿತಾಗಿ ಪುನಃ ಸಮಾಚಾರ ಹಾಗೂ ಜನಸಂಪರ್ಕ ಇಲಾಖೆಗೆ ಹಿಂದಿರುಗಿ ಹೈದರಾಬಾದಿಗೆ ಹೋದರು. ಹೈದರಾಬಾದು ಪ್ರದೇಶದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಾಗ ಅಲ್ಲಿನ ವಿಧಾನಸೌಧದಲ್ಲಿ ಎಡಿಟರ್ ಆಫ್ ಡಿಬೇಟ್ಸ್ ಆದರು. ಭಾಷಾವಾರು ರಾಜ್ಯಗಳೇರ್ಪಟ್ಟಾಗ ಇವರನ್ನು ಆಂಧ್ರ ಪ್ರದೇಶ ಸರ್ಕಾರ ಸಮಾಚಾರ ಹಾಗೂ ಜನಸಂಪರ್ಕ ಇಲಾಖೆಯ ಉಪನಿರ್ದೇಶಕರನ್ನಾಗಿ ನೇಮಿಸಿತು. ಅದೇ ಹುದ್ದೆಯಲ್ಲಿ 1956-65ರವರೆಗೆ ಕೆಲಸ ಮಾಡಿ ನಿವೃತ್ತರಾದರು. ಅದೇ ವರ್ಷ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರೆಂದು ನೇಮಕಗೊಂಡರು.

	ನರಸಿಂಗರಾಯರು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ (1948) ಸಮ್ಮೇಳನದ ಕಾವ್ಯಗೋಷ್ಠಿಯ ಅಧ್ಯಕ್ಷರಾಗಿದ್ದರು. ಹೈದರಾಬಾದು ಕರ್ನಾಟಕ ವಿಭಾಗ ತನ್ನದೇ ಆದ ಒಂದು ಸಾಹಿತ್ಯ ಪರಿಷತ್ತನ್ನು ಹೊಂದಿತ್ತು. ಆ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು (1956). ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು ಬಿದರೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ನಡೆಸಿದಾಗ (1960) ಇವರು ಸಂಶೋಧನೆ ಮತ್ತು ವಿಮರ್ಶೆ ಗೋಷ್ಠಿಗೆ ಅಧ್ಯಕ್ಷರಾಗಿದ್ದರು. ರಾಜ್ಯಗಳ ಪುನರ್ರಚನೆಯ ಅನಂತರ ಶ್ರೀಯುತರು ಆಂಧ್ರ ಪ್ರದೇಶದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಚಾಲಕರಾಗಿದ್ದರು. ಇವೆಲ್ಲಕ್ಕೂ ಮೀರಿದ ಗೌರವಸ್ಥಾನವೆಂದರೆ ಶ್ರೀಯುತರು ಭಾರತ ಸರ್ಕಾರದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸದಸ್ಯರಾಗಿದ್ದುದು.

	ಈ ಎಲ್ಲ ಗೌರವಗಳಿಗೆ ಭಾಜನರಾದ ಇವರು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾಗಲೆ ಹೃದಯಾಘಾತದಿಂದ ಪರಂಧಾಮವನ್ನೈದಿದರು(9-9-1969).

	ಇವರದೇ ಆದ ಕವನಸಂಕಲನವೊಂದು ಹೊರಬಿದ್ದಿಲ್ಲವಾದರೂ ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರ ಪ್ರಕಟಿಸಿದ ಶ್ರೀಕಾರ ಎಂಬ ಗ್ರಂಥದಲ್ಲಿ ಮಾನ್ವಿ ಎಂಬ ಕಾವ್ಯನಾಮದಿಂದ ಇವರು ಕೆಲವು ಕವನಗಳನ್ನು ಬರೆದಿದ್ದಾರೆ. ಇವರ ಪ್ರಕಟವಾದ ಕೃತಿಗಳೆಂದರೆ ಕನ್ನಡ ಯಾತ್ರೆ, ಕನ್ನಡ ಸಾಹಿತ್ಯ ಪರಿಚಯ (ಹಿಂದಿ), ನಡುಗನ್ನಡ ಮತ್ತು ಸರಸ್ವತೀತತ್ತ್ವ. ಕನ್ನಡ ಯಾತ್ರೆ ಎಂಬುದು ವಿ.ಸೀ. ಅವರ ಪಂಪಾಯಾತ್ರೆ ಎಂಬ ಗ್ರಂಥದ ರೀತಿಯದು. ಕನ್ನಡ ಸಾಹಿತ್ಯ ಪರಿಚಯ ಎಂಬುದು ಹಿಂದಿಯಲ್ಲಿ ಬರೆದ ಒಂದು ಸಣ್ಣ ಕೃತಿ. ನಡುಗನ್ನಡ ಎಂಬುದು ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಅದು ಕನ್ನಡದ ನಾಲ್ಕು ಅವಸ್ಥೆಗಳಲ್ಲಿ ಒಂದನ್ನು ಕುರಿತದ್ದು. ಎ.ಆರ್.ಕೃ. ಹೇಳಿರುವಂತೆ ನಡುಗನ್ನಡದ ಚರಿತ್ರೆಯನ್ನು ಭಾಷಾಶಾಸ್ತ್ರದ ಬೆಳಕಿನಲ್ಲಿ ಇನ್ನೂ ವಿವರವಾಗಿ ಬರೆದು ಆ ಕೆಲಸವನ್ನು ಪುಷ್ಟವಾಗಿಯೂ ಶ್ಲಾಘ್ಯವಾಗಿಯೂ ಮಾನ್ವಿಯವರು ಮುಂದುವರಿಸಿದ್ದಾರೆ. ಸರಸ್ವತೀ ತತ್ತ್ವ ಎಂಬುದು ಒಂಬತ್ತು ಲೇಖನಗಳ ಒಂದು ಸಂಗ್ರಹ. ಈ ಲೇಖನಗಳು ವಿವಿಧ ವಿಷಯಗಳನ್ನೊಳಗೊಂಡಿವೆ: ಸರಸ್ವತೀ ತತ್ತ್ವ, ಸಾಹಿತ್ಯದ ಉಗಮ, ರಸ ಸಿದ್ಧಾಂತ, ಕಲೆ ಮತ್ತು ನೀತಿ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವಿಮರ್ಶೆ, ಹೊಸಗನ್ನಡ ನಾಟಕಗಳು, ಹರಿಶ್ಚಂದ್ರ ಕಾವ್ಯದಲ್ಲಿ ವಿಶ್ವಾಮಿತ್ರನ ಪಾತ್ರ, ಕನ್ನಡ ಸಾಹಿತ್ಯಕ್ಕೆ ಹೈದರಾಬಾದು ಸಲ್ಲಿಸಿದ ಸೇವೆ ಮತ್ತು ರಾಯಚೂರು ಕನ್ನಡ. `ಗುರುರಾಜರ ರಾಜ' ಎಂಬ ಅಂಕಿತದಿಂದ ಕೆಲವು ವಚನಗಳನ್ನು ಬರೆದಿದ್ದಾರೆ. ಮಾನ್ವಿಯವರ ಬರೆವಣಿಗೆಯ ಗಾತ್ರ ಸ್ವಲ್ಪವೇ. ಅದು ಎಷ್ಟೇ ಇರಲಿ, ಇದ್ದಷ್ಟೇ ವಿದ್ವತ್ಪೂರ್ಣ, ವಿಚಾರಪೂರ್ಣ.				
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ